ಈಂಗೇಮಾನ್, ಬರ್ನ್ ಹಾರ್ಡ್ ಸೆವಿರಿನ್
1789-1862. ಡೆನ್ಮಾರ್ಕಿನ ಕವಿ, ಕಾದಂಬರಿಕಾರ. ಈತನ ಕೃತಿಗಳು ಡೆನ್ಮಾರ್ಕಿನಲ್ಲಿ ಹಲವು ತಲೆಮಾರುಗಳವರೆಗೂ ಯೂರೋಪಿನಲ್ಲಿ ಮಧ್ಯಯುಗದ ಅಂತ್ಯದವರೆಗೂ ಖ್ಯಾತವಾಗಿದ್ದುವು. ಸ್ಲಾಗೆಲ್ಸ್ ಗ್ರಾಮರ್ ಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಈತ 1806ರಲ್ಲಿ ವಿಶ್ವವಿದ್ಯಾನಿಲಯ ಪ್ರವೇಶಿಸಿದ. ಇಂಗ್ಲಿಷರು ಕೋಪನ್ ಹೇಗನ್ ಅನ್ನು ಮುತ್ತಿ ಅದನ್ನು ಅಗ್ನಿಗಾಹುತಿ ಮಾಡಿದಾಗ ಈತನ ಮೊದಲ ಕೃತಿಗಳ ಹಸ್ತಪ್ರತಿಗಳೆಲ್ಲ ನಾಶವಾದುವು. ತನ್ನ ಕವನಸಂಕಲನದ ಮೊದಲ ಸಂಪುಟವನ್ನು 1811ರಲ್ಲೂ ಎರಡನೆಯದನ್ನು 1812ರಲ್ಲೂ ಪ್ರೊಕ್ನೆ ಎಂಬ ಹೆಸರಿನ ಗೀತೆಗಳ ಪುಸ್ತಕವನ್ನು 1813ರಲ್ಲೂ ಮತ್ತು ದಿ ಬ್ಲ್ಯಾಕ್ ನೈಟ್ಸ್ ಎಂಬ ಪ್ರಣಯಗೀತೆಗಳ ಸಂಕಲನವನ್ನು 1814ರಲ್ಲೂ ಪ್ರಕಟಿಸಿದ. ಮಸಾನಿಲ್ಲೋ ಮತ್ತು ಬ್ಲ್ಯಾಂಕ್ ಎಂಬ ಎರಡು ರುದ್ರನಾಟಕಗಳು, ದಿ ವಾಯ್ಸ್ ಇನ್ ದಿ ಡೆಸರ್ಟ್, ದಿ ಷೆಪರ್ಡ್ ಆಫ್ ಟೊಲೊಸ ಮುಂತಾದ ಇತರ ನಾಟಕಗಳು ಇವನ ಮುಖ್ಯ ಪ್ರಕಟಣೆಗಳು. ಇವು ವಿಮರ್ಶಕರಿಂದ ಭತ್ರ್ಸನೆಗಳನ್ನು ತಿಂದರೂ ಸಾಮಾನ್ಯರ ಮೆಚ್ಚಿಗೆ ಪಡೆದುವು. 1818ರಲ್ಲಿ ರೋಮಿಗೆ ಪ್ರಯಾಣ ಮಾಡಿ, ಅಲ್ಲಿ ದಿ ಲಿಬರೇಷನ್ ಆಫ್ ಟ್ಯಾಸೊ ಎಂಬ ಪುಸ್ತಕವನ್ನು ಬರೆದ. ಮನಮೋಹಕ ಕಥೆಗಳನ್ನೊಳಗೊಂಡ ಕಥಾಸಂಪುಟವನ್ನೊಂದನ್ನು ಬರೆದು ತನ್ನ ನೈಜಸಾಹಿತ್ಯ ಸಾಮಥ್ರ್ಯವನ್ನು ಪ್ರಕಟಿಸಿದ. 1821ರಲ್ಲಿ ಪ್ರಕಟವಾದ ಮ್ಯಾಗ್ನೆಟಿಸಂ ಇನ್ ದಿ ಬಾರ್ಬರ್ಸ್ ಷಾಪ್ ಎಂಬುದೇ ಇವರ ಕಟ್ಟಕಡೆಯ ಸುಖಾಂತ ನಾಟಕ. ಸೊರೋನಲ್ಲಿ ಉಪಾಧ್ಯಾಯವೃತ್ತಿ ಪಡೆದ ಮೇಲೆ ಅನೇಕ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ. ಇವನ ವಾಲ್‍ಡೆಮಾರ್ ಸಿಯರ್ ಎಂಬ ಐತಿಹಾಸಿಕ ಕಾವ್ಯ 1824ರಲ್ಲಿ ಪ್ರಕಟಗೊಂಡಿತು. ಎರಿಕ್‍ಮನ್ ವೆಡ್ಸ್ ಚೈಲ್ಡ್‍ಹುಡ್ (1828), ಕಿಂಗ್ ಎರಿಕ್ (1833), ಪ್ರಿನ್ಸ್ ಆಟೋ ಆಫ್ ಡೆನ್ಮಾರ್ಕ್ (1835)- ಇವೇ ಈತನ ಖ್ಯಾತ ಕಾದಂಬರಿಗಳು. ಕ್ವೀನ್ ಮಾರ್ಗರೇಟ್ (1836) ಎಂಬ ಕಾವ್ಯವನ್ನೂ ಹೋಲ್ಜರ್ ಡಾನ್ಸೆಕೆ ಎಂಬ ಒಂದು ಜನಪ್ರಿಯ ನಾಟಕವನ್ನೂ ಈತ ಬರೆದ. ದಿ ಆಪಲ್ ಆಫ್ ಗೋಲ್ಡ್ (1856) ಎಂಬುದೇ ಈತನ ಅಂತಿಮ ಕೃತಿ. ಈತ ಬರೆದ ಸ್ತೋತ್ರ ಗೀತೆಗಳಲ್ಲಿ ಒಂದಾದ ಥ್ರೂ ದಿ ನೈಟ್ ಆಫ್ ಡೌಟ್ ಅಂಡ್ ಸಾರೊ ಎಂಬ ಇಂಗ್ಲಿಷ್ ಅನುವಾದ ಪ್ರಖ್ಯಾತವಾದುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ